Monday, April 21, 2008

ಕಡಿದಾಳು ಶಾಮಣ್ಣ

ಸ್ವಾತಂತ್ರ್ಯಾನಂತರ ದೇಶ ಕಟ್ಟುವ ಆದರ್ಶದಲ್ಲಿ ತೊಡಗಿಕೊಂಡ ಕೆಲವು ಮನಸ್ಸುಗಳು ವಯಸ್ಕರ ಶಿಕ್ಷಣ, ಗ್ರಾಮ ನೈರ್ಮಲ್ಯ, ಪಾನನಿರೋಧ ಇತ್ಯಾದಿ ಬಹು ಜಟಿಲವಾದ ಕೆಲಸಗಳನ್ನು ಕೈಗೆತ್ತಿಕೊಂಡು ಹೊರಟವು. ಆ ಪೈಕಿ ಮಲೆನಾಡಿನ ಮೂಲೆಯ ಕಡಿದಾಳಿನಲ್ಲಿ ಜನ್ಮ ತಾಳಿದ ಶಾಮಣ್ಣ ವಿದ್ಯಾರ್ಥಿ ದೆಸೆಯಿಂದಲೇ ದೇಸೀ ಚಿಂತಕರಾಗಿ ಮೂಢನಂಬಿಕೆ ವಿರೋಧ, ಸರಳ ಮದುವೆ, ಬೇಸಾಯ ಹಾಗೂ ತನ್ನ ಸುತ್ತಮುತ್ತಲ ಜನರನ್ನು ತಮ್ಮ ಅಭಿರುಚಿಯತ್ತ ಸೆಳೆಯುವಲ್ಲಿ ಪಟ್ಟಪಾಡು ಈ ನಾಟಕದ ತಿರುಳು. ಈ ದೇಶದಲ್ಲಿ ಬಹು ಕಷ್ಟಕರವಾದ ಜೀವನ ರೈತನದ್ದು. ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತ ಸಂಘಟನೆಯಲ್ಲದೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ದುಸ್ತರ ಬದುಕಿಗೆ ತುತ್ತಾಗಿ, ಕಡೆಗೆ ಆತ್ಮಹತ್ಯೆ ಎಡೆಗೆ ಸಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ರೈತರನ್ನು ಸಂಘಟಿಸಿ ಅವರಲ್ಲಿ ಎಚ್ಚರ ಮೂಡಿಸಿ ಒಂದು ರಾಜಕೀಯ ಶಕ್ತಿಯಾಗಿ ರೂಪಿಸಲು ಹಗಲು ರಾತ್ರಿ ಶ್ರಮಿಸಿದ ಶಾಮಣ್ಣ, ತಮ್ಮ ನಿರ್ಭೀತ ಮಾತು ಮತ್ತು ಸ್ವಾತಂತ್ರಪ್ರಿಯ ನಡವಳಿಕೆಯಿಂದಾಗಿ ಅವಮಾನಿತರಾಗುತ್ತಾರೆ. ಇದು ರೈತ ಸಂಘದ ದೊಡ್ಡ ದುರಂತವಾಗಿ ಸಂಭವಿಸುತ್ತದೆ. ಈ ನಾಟಕದ ದೇಸೀ ಚಿಂತಕ ಶಾಮಣ್ಣ ಸಮಕಾಲೀನ ಸಂದರ್ಭದಲ್ಲಿ ಒಬ್ಬ ವಿಸ್ಮಯಕರ ವ್ಯಕ್ತಿ. ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯಷ್ಟೇ ಮುಖ್ಯವಾದ ಚಟುವಟಿಕೆ ಎಂದರೆ ಸಂಗೀತ ಕಲಿಯುವುದು ಮತ್ತು ಬದುಕಿನ ಪ್ರಯೋಗಶೀಲತೆಯೇ ಮುಖ್ಯ ಎಂದು ನಂಬಿದವರು. ಆ ಕಾರಣಕ್ಕೆ ಇವರು ಶಾಲೆಯಿಂದ ಹೊರಗೆ ಕಲಿತದ್ದೇ ಹೆಚ್ಚು. ವಿದ್ಯಾರ್ಥಿ ದೆಸೆಯಲ್ಲೇ ಹಾರ್‍ಮೋನಿಯಂ, ತಬಲ, ಕೊಳಲು ಮತ್ತು ಸರೋದ್ ಕಲಿತ ಶಾಮಣ್ಣ ಸಂಸಾರಸ್ಥರಾದ ಮೇಲೆ ತಮ್ಮ ಸುತ್ತಲ ಜನರಿಗೆ ಫೋಟೋಗ್ರಫಿ ಕಲಿಸಿದರು. ಸಾರಾಯಿ ನಿಷೇಧ ಚಳುವಳಿ ಮಾಡಿ ಯಶಸ್ವಿಯಾದರು. ನಾಟಕ ಕಲಿಸಿದರು. ಮಕ್ಕಳಿಗೆ ಕುವೆಂಪು ಶಿಶುಗೀತೆ ಕಲಿಸಿದರು. ಜೊತೆಗೆ ರೈತರನ್ನು ಸಂಘಟಿಸಿದರು. ಇದೆಲ್ಲಾ ಇವರ ವಿರಾಟ್‌ರೂಪ ದರ್ಶನದ ಕೆಲವು ಉದಾಹರಣೆಗಳು. ಆದರೆ ರೈತಸಂಘದವರು ಕೇವಲ ಹಸಿರು ಟವೆಲ್ ಕಸಿದುಕೊಂಡ ಹೋದ ಮಾತ್ರಕ್ಕೆ ಅವರ ಚೈತನ್ಯ ಉಡುಗಿ ಹೋಗಲಿಲ್ಲ. ಎಂದಿನಂತೆ ತಮ್ಮ ಚಟುವಟಿಕೆ ಮುಂದುವರೆಸಿದ್ದಾರೆ. ಇದನ್ನೆಲ್ಲಾ ಗಮನಿಸಿ ನಮ್ಮ ನಡುವೆ ಇರುವ ವ್ಯಕ್ತಿಯೊಬ್ಬರ ಕುರಿತು ನಾಟಕ ರಚನೆಯಾಗಿದೆ. ಬಹುಶಃ ನಮ್ಮ ನಡುವೆಯೇ ಇರುವ ವ್ಯಕ್ತಿಯೊಬ್ಬರ ಕುರಿತು ನಾಟಕವೊಂದು ಸಿದ್ಧವಾಗಿರುವುದು ಇದೇ ಮೊದಲು.

ಸಾಸ್ವೆಹಳ್ಳಿ ಸತೀಶ್

ವೃತ್ತಿಯಲ್ಲಿ ಶಿಕ್ಷಕರಾಗಿರುವ ಸಾಸ್ವೆಹಳ್ಳಿ ಸತೀಶ್ ಅವರಿಗೆ ರಂಗಭೂಮಿ ಚಟುವಟಿಕೆಯೇ ಪ್ರವೃತ್ತಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾಗಿರುವ ಮಲೆನಾಡಿನ ಕೇಂದ್ರ ಶಿವಮೊಗ್ಗದಲ್ಲಿ ನಡೆಯುತ್ತಿರುವ ಸೃಜನಶೀಲ ಚಟುವಟಿಕೆಗಳಲ್ಲಿ ಸಕ್ರಿಯರು. ಇದುವರೆಗೆ ಏಕಲವ್ಯ, ಕನಸಿನವರು, ಧನ್ವಂತರಿ ಚಿಕಿತ್ಸೆ, ದೇವರ ಹೆಣ, ಮದಗದ ಕೆಂಚವ್ವ, ಮೃತ್ಯು, ಕಡಿದಾಳು ಶಾಮಣ್ಣ, ಭಳಾರೆ ವಿಚಿತ್ರಂ! ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಗನ ಕಥೆ, ದೇವರ ಹೆಣ, ಕೆಂಡದ ಮಳೆ ಕರೆವಲ್ಲಿ ಉದಕವಾದವರ ಕಥೆ, ಸಂಸ್ಕಾರ, ಬೆಟ್ಟದಾಚೆ ಮುಂತಾದ ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ. ಹಲವು ನಾಟಕಗಳಲ್ಲಿ ಅಭಿನಯಿಸಿರುವುದಲ್ಲದೇ ‘ಕರ್ಣ’ ಹಾಗೂ ‘ದಾರಾಶಿಕೋ’ ಏಕವ್ಯಕ್ತಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಹಲವು ಬಾರಿ ಉತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. ೪೦ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ನಿರ್ದೇಶಿಸಿರುವ ಸತೀಶ್ ಅವರು ಪ್ರಸಾಧನ, ರಂಗಸಜ್ಜಿಕೆ, ಸಂಗೀತ ವಿಭಾಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಡಿದಾಳು ಶಾಮಣ್ಣ ನಾಟಕವನ್ನು ಅವರು ನಿರ್ದೇಶಿಸಿದ್ದಾರೆ.

ಬಿ. ಚಂದ್ರೇಗೌಡ

ಲಂಕೇಶ್ ಪತ್ರಿಕೆಯ ಬಯಲುಸೀಮೆ ಕಟ್ಟೆಪುರಾಣ ಅಂಕಣದ ಮೂಲಕ ಅಕ್ಷರ ಲೋಕಕ್ಕೆ ಚಿರಪರಿಚಿತರಾಗಿರುವ ಬಿ. ಚಂದ್ರೇಗೌಡ ಅವರು ನಾಟಕಕಾರರು, ಸಾಹಿತಿಗಳೂ ಹೌದು. ಬಯಲುಸೀಮೆ ಕಟ್ಟೆಪುರಾಣ, ಧನ್ವಂತರಿ ಚಿಕಿತ್ಸೆ, ಕಡಿದಾಳು ಶಾಮಣ್ಣ, ಗೌಸಣ್ಣನ ಗಣಪತಿ (ಅಚ್ಚಿನಲ್ಲಿದೆ) ನಾಟಕಗಳನ್ನು ರಚಿಸಿದ್ದು, ಮೊದಲ ಮೂರು ನಾಟಕಗಳು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಹತ್ತಾರು ಪ್ರದರ್ಶನಗಳನ್ನು ಕಂಡಿದೆ. ಸ್ವತಃ ನಟರೂ ಆಗಿರುವ ಚಂದ್ರೇಗೌಡರ ಕಾದಂಬರಿ, ಲಲಿತ ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ಅವ್ವ ಸೇರಿದಂತೆ ಹಲವು ಚಲನಚಿತ್ರಗಳ ಸಂಭಾಷಣಾಕಾರರೂ ಹೌದು.

1 comment:

ಜಾತ್ರೆ said...

Registration- Seminar on the occasion of kannadasaahithya.com 8th year Celebration

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends

-kannadasaahithya.com balaga