Monday, April 21, 2008

ಭಳಾರೆ ವಿಚಿತ್ರಂ!

ನಾಡಿನ ಪ್ರಸಿದ್ಧ ಕತೆಗಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಂ. ವೀರಭದ್ರಪ್ಪ ಅವರ ಸಂಸ್ಕಾರ, ಬೆಟ್ಟದಾಚೆ, ದೇವರ ಹೆಣ ಕಥೆಗಳ ಜೊತೆಯಲ್ಲಿ ಕೆಲ ಬರಹಗಳನ್ನು ಇಟ್ಟುಕೊಂಡು ಈ ನಾಟಕವನ್ನು ರೂಪಿಸಲಾಗಿದೆ. ಬಡತನ, ಹಸಿವು, ಶೋಷಣೆ ಹೇಗೆ ಒಂದಕ್ಕೊಂದು ಸ್ಫೂರ್ತಿ ಪಡೆದು, ಮೇಲಾಟಕ್ಕೆ ಇಳಿ ಮತ್ತೆಮತ್ತೆ ಸೋಲನ್ನು ಅನುಭವಿಸುತ್ತಿವೆ, ಈ ಸೋಲುಗಳು ತಮಗರಿವಿಲ್ಲದಂತೆ ವೈಯಕ್ತಿಕ ಮತ್ತು ಸಾಮೂಹಿಕ ಹೋರಾಟಗಳಾಗಿ ಮಾರ್ಪಟ್ಟು ದಿಕ್ಕೆಟ್ಟಿರುವ ಸಮಾಜವನ್ನು ಜಾಗೃತ ಸ್ಥಿತಿಯಲ್ಲಿ ಇಡಲು ಪ್ರಯತ್ನಿಸುತ್ತವೆ ಎಂಬುದನ್ನು ಈ ನಾಟಕ ಸೂಕ್ಷ್ಮವಾಗಿ ತೆರೆದಿಡುತ್ತದೆ. ಅಕ್ಷರ ಜ್ಞಾನವಿದ್ದು, ಆರ್ಥಿಕವಾಗಿ ಪ್ರಬಲವಾಗಿರುವ ಒಂದು ವರ್ಗ ಅನಕ್ಷರಸ್ಥರನ್ನು, ವಿದ್ಯಾವಂತರನ್ನು ಜೊತೆಜೊತೆಗೆ ಮೋಸಗೊಳಿಸುತ್ತಾ ತಾನು ಮಾತ್ರ ಬದುಕಬೇಕೆನ್ನುವ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕೆನ್ನುವ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ, ಅದರಿಂದಾಗುತ್ತಿರುವ ಅನಾಹುತಗಳನ್ನು ಸರಳವಾದ ಘಟನೆಗಳ ಮೂಲಕ ನಾಟಕ ತಿಳಿಸುತ್ತದೆ. ಹಸಿವಿನ ತೀವ್ರತೆ ಮನುಷ್ಯನನ್ನು ವ್ಯವಸ್ಥೆಯ ವಿರುದ್ಧ ಸಿಡಿದೇಳುವಂತೆ ಮಾಡುವ ಮೂಲಕ, ನಾಗರೀಕ ಸಮಾಜ ಮೇಲ್ನೋಟಕ್ಕೆ ಹರ್ಷದಾಯಕ, ಸಂತೋಷದಾಯಕ ಬದುಕು ಎಷ್ಟು ಪೊಳ್ಳು ಎಂಬುದನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಮುಖ್ಯವಾಗಿ ಕನ್ನಡ ಸಾಹಿತ್ಯದ ದೈತ್ಯ ಪ್ರತಿಭೆ ಕುಂ. ವೀರಭದ್ರಪ್ಪ ಅವರ ಜೀವನದ ಕೆಲ ಘಟನೆಗಳು ನಾಟಕದ ಓಟಕ್ಕೆ ಪೂರಕವಾಗಿ ನಿಲ್ಲುತ್ತವೆ.

ನಿರ್ದೇಶಕರು

ಭಳಾರೆ ವಿಚಿತ್ರಂ ನಾಟಕವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದಾರೆ. ಇದುವರೆಗೂ ಅವರು ಕಡಿದಾಳು ಶಾಮಣ್ಣ, ಧನ್ವಂತರಿ ಚಿಕಿತ್ಸೆ, ಏಕಲವ್ಯ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ನಟನೆಗೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ೪೦ಕ್ಕೂ ಹೆಚ್ಚು ನಾಟಕಗಳ ನಿರ್ದೇಶನ, ಪ್ರಸಾದನ, ರಂಗಸಜ್ಜಿಕೆ ಹೊಣೆಯನ್ನು ನಿರ್ವಹಿಸಿದ್ದಾರೆ.

ಪ್ರದರ್ಶನ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜನವರಿ ೬, ೨೦೦೮ಕ್ಕೆ
ಬೆಂಗಳೂರಿನಲ್ಲಿ ನಡೆದ ರಂಗ ಪ್ರತಿಭೆ ನಾಟಕೊತ್ಸವದಲ್ಲಿ ಜನವರಿ ೮, ೨೦೦೮ಕ್ಕೆ.
ಬೆಳಗಾವಿಯಲ್ಲಿ ನಡೆದ ರಂಗ ಪ್ರತಿಭೆ ನಾಟಕೊತ್ಸವದಲ್ಲಿ ೨೦೦೮ರ ಫೆಬ್ರವರಿ ೧೯ಕ್ಕೆ.
ಮುಂಬಯಿಯ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ೨೦೦೮ರ ಮಾರ್ಚ್ ೨೧ಕ್ಕೆ.

No comments: